ಅವನೇ ದೇವರು (#9476)

ಓ ಪ್ರಭು ನನ್ನ ದೇವರೇ! ದುರ್ಬಲರ ಸಹಾಯಕನೂ, ಬಡವರ ಆಧಾರಿಯೂ ಹಾಗೂ ನಿನ್ನೆಡೆಗೆ ತಿರುಗುವ ಅಸಹಾಯಕರ ಉದ್ಧಾರಕನೂ ನೀನೇ.
ಪರಮ ದೀನನಾಗಿ, ನಿನ್ನ ಸೌಂದರ್ಯದ ಸಾಮ್ರಾಜ್ಯದತ್ತ ನನ್ನ ನಮ್ರ ಕೈಗಳನ್ನು ಚಾಚಿ ನನ್ನ ಅಂತರ್ ನಾಲಿಗೆಯಿಂದ ನಿನ್ನಲ್ಲಿ ಅತ್ಯುತ್ಸಾಹದಿಂದ ಈ ರೀತಿ ಬಿನ್ನವಿಸುತ್ತಿದ್ದೇನೆ.  ಓ ದೇವರೇ, ನನ್ನ ದೇವರೇ! ನಿನ್ನನ್ನು ಆರಾಧಿಸುವಂತೆ ನನಗೆ ಸಹಾಯನೀಡು.  ನಿನ್ನ ಸೇವೆಗೈಯ್ಯುವಂತೆ ನನ್ನ ಟೊಂಕವನ್ನು ಭದ್ರಪಡಿಸು; ನಿನಗಾಗಿ ನನ್ನ ಸೇವೆಯಲ್ಲಿ ನಿನ್ನ ಅನುಗ್ರಹದ ನೆರವು ನೀಡು; ನಿನಗೆ ವಿಧೇಯನಾಗಿರುವಲ್ಲಿ ನಾನು ದೃಢನಾಗಿರುವಂತೆ ನನಗೆ ಕಷ್ಟಗಳನ್ನೊದಗಿಸು; ನನ್ನ ಮೇಲೆ ನಿನ್ನ ಉದಾತ್ತ ಔದಾರ್ಯವನ್ನು ಉಕ್ಕಿ ಹರಿಯುವಂತೆ ಎಸಗು. ನಿನ್ನ ಪ್ರೇಮಪೂರಿತ ದಯಾದೃಷ್ಟಿಯನ್ನು ನನ್ನತ್ತ ಬೀರು ಹಾಗೂ ನಿನ್ನ ಕೃಪಾಸಾಗರದಲ್ಲಿ ನನ್ನನ್ನು ಮುಳುಗಿಸು.  ನಿನ್ನ ಧರ್ಮದಲ್ಲಿ ನನ್ನ ಸ್ವಾಮಿನಿಷ್ಠೆಯ ಬಗ್ಗೆ ನಾನು ದೃಢನಾಗಿರುವಂತೆ ಅನುಗ್ರಹಿಸು.  ನಿಶ್ಚಯತೆ ಹಾಗೂ ಭರವಸೆಯ ಪೂರ್ಣ ಪ್ರಮಾಣವನ್ನು ನನ್ನ ಮೇಲೆ ಕರುಣಿಸು, ಆದರಿಂಡ ನಾನು ಈ ಪ್ರಪಂಚದಿಂದ ಸಂಪೂರ್ಣವಾಗಿ ಮುಕ್ತನಾಗಬಹುದು, ನಿನ್ನ ಮುಖಾರವಿಂದದೆಡೆ ನನ್ನ ಪೂರ್ಣ ಭಕ್ತಿಯ ಮುಖವನ್ನು ತಿರುಗಿಸಬಹುದು, ಸಾಕ್ಷ್ಯ ಮತ್ತು ಪುರಾವೆಗಳ ನಿರ್ಬಂಧಿತ ಶಕ್ತಿಯಿಂದ ಬಲಯುತಗೊಳ್ಳಬಹುದು, ಹಾಗೂ ಭವ್ಯತೆ ಮತ್ತು ಬಲದಿಂದೊಡಗೂಡಿ ಭೂಲೋಕ ಮತ್ತು ಸ್ವರ್ಗದ ಪ್ರತಿಯೊಂದು ಪ್ರದೇಶವನ್ನು ಮೀರಿ ಹೋಗಬಹುದು.  ಸತ್ಯವಾಗಿಯೂ ನೀನು ಕೃಪಾಳುವೂ, ಸರ್ವ ವೈಭವಶಾಲಿಯೂ, ದಯಾಳುವೂ, ಕರುಣಾಕರನೂ ಆಗಿರುವೆ.
ಓ ಪ್ರಭುವೇ! ಇವರು ಹುತಾತ್ಮರ ಜೊತೆಗಿದ್ದು ಬದುಕುಳಿದ, ಪವಿತ್ರ ಆತ್ಮಗಳ ಒಡನಾಡಿಗಳು.  ಅವರು ಒಂದೊಂದು ಯಾತನೆಯನ್ನೂ ಸಹಿಸಿದ್ದರಲ್ಲದೆ ಘೋರ ಅನ್ಯಾಯವನ್ನು ಎದುರಿಸುವಲ್ಲಿ ಸಹನೆಯನ್ನು ಪ್ರದರ್ಶಿಸಿದ್ದರು.  ಅವರು ಸಕಲ ಸೌಕರ್ಯ ಹಾಗೂ ಸಮೃದ್ಧಿಯನ್ನು ಪರಿತ್ಯಜಿಸಿರುವರು.  ನಿನ್ನ ಪ್ರೀತಿಯ ಮಾರ್ಗದಲ್ಲಿ ದಾರುಣ ವೇದನೆ ಮತ್ತು ವಿಪತ್ತುಗಳಿಗೆ ಸ್ವಇಚ್ಛೆಯಿಂದ ಒಳಪಡಿಸಿರುವರು, ನಿನ್ನ ನೇರವಾದ ಪಥದಲ್ಲಿ ಅವರು ದೃಢವಾಗಿ ನಡೆಯುತ್ತಿರುವುದರಿಂದ ಅವರಿನ್ನೂ ಶತ್ರುಗಳ ಬಿಗಿ ಹಿಡಿತದಲ್ಲಿ ಬಂಧಿಯಾಗಿದ್ದು. ಸತತವಾದ ಭಯಂಕರ ಯಾತನೆಗೊಳಪಟ್ಟು ಹಿಂಸಿಸಲ್ಪಟ್ಟಿರುವರು.  ಅವರಿಗೆ ನೆರವು ನೀಡುವವರ್ಯಾರು ಇಲ್ಲ. ಅವರ ಮಿತೃತ್ವ ಬಯಸುವವರ್ಯಾರೂ ಇಲ್ಲ. ತುಚ್ಛ ಮತ್ತು ಅಧರ್ಮಿಗಳಲ್ಲದೆ ಅವರೊಡನೆ ಬೆರೆಯಲು ಮತ್ತು ಸಮರಸದಿಂದಿರಲು ಯಾರೊಬ್ಬರೂ ಇಲ್ಲ.
ಓ ಪ್ರಭುವೇ! ಈ ಆತ್ಮಗಳು ಈ ಪ್ರಾಪಂಚಿಕ ಜೀವನದಲ್ಲಿ ಕಹಿಯಾದ ವ್ಯಥೆಯನ್ನು ಸವಿದಿರುವರು ಮತ್ತು ನಿನ್ನ ಸ್ವರ್ಗೀಯ ಸಾಮ್ರಾಜ್ಯವನ್ನು ಸೇರುವ ತವಕದಲ್ಲಿ, ನಿನ್ನ ಮುಖಾರವಿಂದದ ಕಂಗೊಳಿಸುವ ಸೌಂದರ್ಯದ ಪ್ರೀತಿಯ ಕುರುಹಾಗಿ, ಪೀಡಕರು ಅವರ ಮೇಲೆ ಹೇರಿದ ಭೀಭತ್ಸ ಅಪಮಾನವನ್ನು ಅವರು ಸಹಿಸಿರುವರು.  ಓ ಪ್ರಭುವೇ! ಅವರ ಕಿವಿಗಳನ್ನು ದೈವೀ ನೆರವಿನ ಹಾಗೂ ಶೀಘ್ರ ವಿಜಯದ ವಾಣಿಗಳಿಂದ ತುಂಬು ಹಾಗೂ ದಾರುಣ ಶಕ್ತಿಯಿಂದ ಅಧಿಕಾರ ಚಲಾಯಿಸುವವರ ಹಿಂಸೆಯಿಂದ ಅವರನ್ನು ಮುಕ್ತಗೊಳಿಸು.  ಅಧರ್ಮಿಗಳ ಕೈಗಳನ್ನು ತಡೆಹಿಡಿ, ಈ ಆತ್ಮಗಳನ್ನು ಅನಾಗರಿಕ ಕ್ರೂರಿಗಳ ಉಗುರುಗಳು ಮತ್ತು ಹಲ್ಲುಗಳಿಂದ ಸೀಳುವಂತೆ ಮಾಡು.  ಏಕೆಂದರೆ, ನಿನ್ನ ಮೇಲಿನ ಪ್ರೀತಿಯಿಂದ ಅವರು ಮರುಳಾಗಿರುವರು, ನಿನ್ನ ಪವಿತ್ರತೆಯ ರಹಸ್ಯಗಳನ್ನು ಒಪ್ಪಿಕೊಂಡಿರುವವರಾಗಿ, ನಿನ್ನ ದ್ವಾರದಲ್ಲಿ ವಿನೀತರಾಗಿ ನಿಂತಿರುವರು ಹಾಗೂ ನಿನ್ನ ಪರಮೋತ್ತಮ ಆವರಣವನ್ನು ಸೇರಿದವರಾಗಿರುವರು.
ಓ ಪ್ರಭುವೇ! ನವ ಚೈತನ್ಯದಿಂದ ಅವರನ್ನು ಉದಾರವಾಗಿ ಬಲಪಡಿಸು; ರಾತ್ರಿಯ ಮಬ್ಬು ಕತ್ತಲಿನಲ್ಲಿ ನಿನ್ನ ಅದ್ಭುತವಾದ ಪುರಾವೆಗಳನ್ನೂ  ವೀಕ್ಷಿಸುವಂತೆ ಮಾಡಲು ಅವರ ಕಣ್ಣುಗಳನ್ನು ಪ್ರಜ್ವಲಿಸು; ಸನಾತನ ರಹಸ್ಯಗಳಿಂದ ತುಂಬಿದ ನಿನ್ನ ಸಾಮ್ರಾಜ್ಯದಲ್ಲಿ ಸಮೃದ್ಧವಾಗಿರುವ ಎಲ್ಲಾ ಒಳ್ಳೆಯದನ್ನು ಅವರಿಗಾಗಿ ಗೊತ್ತುಪಡಿಸು; ಎಲ್ಲಾ ಪ್ರದೇಶಗಳ ಮೇಲೂ ದೇದೀಪ್ಯಮಾನವಾಗಿ ಹೊಳೆಯುವ ನಕ್ಷತ್ರದಂತೆಯೂ, ಫಲಭರಿತ ಸಮೃದ್ಧ ವೃಕ್ಷಗಳಂತೆಯೂ ಹಾಗೂ ಮುಂಜಾವಿನ ತಂಗಾಳಿಯಲ್ಲಿ ಅಲುಗಾಡುವ ಕೊಂಬೆಗಳಂತೆಯೂ ಮಾಡು.  ನಿಜವಾಗಿಯೂ, ನೀನು ಉದಾರಿಯೂ, ಪ್ರಬಲನೂ, ಸರ್ವಶಕ್ತನೂ, ಅನಿರ್ಬಂಧಿತನೂ, ಆಗಿರುವೆ.  ಪ್ರೀತಿ ಹಾಗೂ ಸುಕೋಮಲ ಕರುಣೆಯ, ಸರ್ವ ವೈಭವಶಾಲಿ, ಸರ್ವದಾ ಕ್ಷಮಾಶೀಲ ದೇವರಿಲ್ಲದೆ ಅನ್ಯ ದೇವರಿಲ್ಲ.

-`Abdu'l-Bahá
-----------------------

ಅವನೇ ದೇವರು (#9477)

ಓ ಭಗವಂತನೇ, ನನ್ನ ಭಗವಂತನೇ, ನಿನ್ನ ವಿಶ್ವಾಸಾರ್ಹರಾದ ಸೇವಕರನ್ನು ರಕ್ಷಿಸು. ಅವರನ್ನು ಸ್ವಾರ್ಥ ಮತ್ತು ಮೋಹದ ಕೆಡುಕಿನಿಂದ ಕಾಪಾಡು.  ನಿನ್ನ ಪ್ರೇಮಮಯವಾದ ದೃಷ್ಟಿಯಿಂದ ಅವರನ್ನು ಮತ್ಸರ, ದ್ವೇಷ ಮತ್ತು ಅಸೂಯೆಗಳಿಂದ ರಕ್ಷಿಸು.  ನಿನ್ನ ಉದ್ದಿಶ್ಯದ ಅಭೇದ್ಯವಾದ ಕೋಟೆಯೊಳಗಿಟ್ಟು ಆಶ್ರಯ ನೀಡು.  ಸಂಶಯವೆಂಬ ಆಯುಧದಿಂದ ಕ್ಷೇಮವಾಗಿರಿಸು.  ಅವರನ್ನು ನಿನ್ನ ದಿವ್ಯ ಸಾಕ್ಷಾತ್ಕಾರದ ಮೂರ್ತಿ ಸ್ವರೂಪರನ್ನಾಗಿ ಮಾಡು.  ನಿನ್ನ ದೈವಿಕ ಏಕತೆಯ ದೈನಿಕ ಚಿಲುಮೆಯಿಂದ ಹೊರಹೊಮ್ಮುವ ದೇದೀಪ್ಯಮಾನವಾದ ಕಿರಣಗಳ ಮೂಲಕ ಅವರ ಮುಖಾರವಿಂದಗಳನ್ನು ಶೋಭಿಸುವಂತೆ ಮಾಡು.  ನಿನ್ನ ಪವಿತ್ರ ಸಾಮ್ರಾಜ್ಯದಿಂದ ಪ್ರಸನ್ನತೆಗೊಳ್ಳುವ ಶ್ಲೋಕಗಳಿಂದ ಅವರಿಗೆ ಹೃದಯಾನಂದವನ್ನು ಉಂಟುಮಾಡು.  ನಿನ್ನ ಸರ್ವಶಕ್ತಿಯಿಂದ ಅವರ ಟೊಂಕವನ್ನು ಭದ್ರಪಡಿಸು, ನೀನೇ ಸರ್ವ ಪ್ರದಾತ, ರಕ್ಷಕ, ಸರ್ವಶಕ್ತ, ಅಷ್ಟೇ ಅಲ್ಲ ದಯಾಳು.

-`Abdu'l-Bahá
-----------------------

ಅವನೇ ದೇವರು (#9478)

ಅವನು ದಯಾಮಯಿ, ಅನುಪಮ ಉದಾರಿ, ಓ ನನ್ನ ದೈವವೇ, ನೀನು ನನ್ನನ್ನು ಗಮನಿಸಿರುವೆ.  ತಿಳಿದಿರುವೆ, ನೀನೇ ನನ್ನ ಆಸರೆ ಮತ್ತು ನನ್ನ ಆಶ್ರಯದಾತ.  ಯಾರನ್ನೂ ನಾನು ಮೊರೆ ಹೊಕ್ಕಿಲ್ಲ.  ನಿನ್ನನ್ನಲ್ಲದೆ ಯಾರನ್ನೂ ನಾನು ಆಶ್ರಯಿಸೆ.  ನಿನ್ನ ಪ್ರೀತಿಯ ದಾರಿಯನ್ನಲ್ಲದೆ ಇನ್ನಾವ ದಾರಿಯನ್ನು ತುಳಿದಿಲ್ಲ.  ಮುಂದೆಯೂ ತುಳಿಯೆ.  ನನ್ನ ಕಣ್ಣುಗಳು ನಿರಾಶೆಯ ಕಗ್ಗತ್ತಲಿನ ರಾತ್ರಿಯಲ್ಲಿ ನಿರೀಕ್ಷೆ ಹಾಗೂ ಆಶಾಭಾವನೆಯಿಂದ ನಿನ್ನ ಅಪಾರ ಉಪಕಾರದತ್ತ ಮುಂಜಾನೆಯಲ್ಲಿ ತಿರುಗುವುವು.  ನಿನ್ನ ಸೌಂದರ್ಯ ಹಾಗೂ ಪರಿಪೂರ್ಣತೆಯ ಸೂರ್ಯೋದಯದ ಸಮಯದಲ್ಲಿ ನನ್ನ ಕುಗ್ಗಿದ ಆತ್ಮ ನವಚೇತನದಿಂದ, ಸ್ಫೂರ್ತಿಯಿಂದ ಬೆಳಗುವುದು. ಹನಿ ಮಾತ್ರವಾದರೂ ಸರಿ, ನಿನ್ನ ಕೃಪೆಯ ಸಹಾಯದಿಂಡ ಯಾವನೇ ಆಗಲಿ ಅವನು ಮಹಾಸಾಗರದಂತಾಗುವನು. ನಿನ್ನ ಪ್ರೀತಿಯ ನೆರವಿನಿಂದ ಅಣುವಿನ ಸಮಾನವಿದ್ದರೂ ಅವನು ಪ್ರಜ್ವಲಿಸುವ ತಾರೆಯಂತಾಗಿ ಪ್ರಕಾಶಿಸುವನು.
ಓ ಪವಿತ್ರಾತ್ಮನೇ, ನಿನ್ನ ಆಶ್ರಯದಲ್ಲಿ ರಕ್ಷಣೆ ನೀಡು.  ಸರ್ವ ಉದಾರಿಯಾಗಿರುವ ನೀನು ಈ ದಾಸ, ಎಚ್ಚೆತ್ತ ಸೇವಕನನ್ನು ಉದ್ದರಿಸು.  ನಿನ್ನ ವಿಚಾರದಲ್ಲಿ ದೃಢ ಹಾಗೂ ಸ್ಥೈರ್ಯದ ಪ್ರೀತಿಯಿಂದಿರಲು ಸಹಾಯ ಮಾಡು.  ರೆಕ್ಕೆ ಮುರಿದ ಈ ಹಕ್ಕಿ ನಿನ್ನ ದೈವಿಕ ಗೂಡಿನಲ್ಲಿ, ಸ್ವರ್ಗ ಸದೃಶವಾದ ಗೂಡಿನಲ್ಲಿ ರಕ್ಷಣೆ ಪಡೆಯಲು ಅನುಗ್ರಹಿಸು.

-`Abdu'l-Bahá
-----------------------

